ಪ್ರಳಯ ಅಂದ್ರೆ ಸಾಕು ಎಂಥವರ ಕಿವಿ ಕೂಡಾ ಚುರುಕಾಗತ್ತೆ. ಕೆಲವರು ಒಂದು ಕ್ಷಣ ಭವಿಷ್ಯದ ಯೋಚನೆಯಲ್ಲಿ ಚಿಂತಾಕ್ರಾಂತರಾದ್ರೆ, ಇನ್ನು ಕೆಲವರು ಟೇಕ್ ಇಟ್ ಈಸಿ ಪಾಲಿಸಿ ಅನುಸರಿಸ್ತಾ ನಿರ್ಲಕ್ಷಿಸಿದ್ದಾರೆ. ಆದ್ರೂ ಪ್ರಳಯಕ್ಕೂ ಒಂದು ಮುನ್ಸೂಚನೆ ಇದೆ ಅಂದ್ರೆ ನೀವು ನಂಬ್ತೀರಾ…
ಇಂಥ ಪ್ರಳಯಕ್ಕೆ ಮುನ್ಸೂಚನೆ ಸಿಕ್ಕಿರೋದು ಬೇರೆಲ್ಲೂ ಅಲ್ಲ. ಬೆಂಗಳೂರಿಗೆ ಪಕ್ಕದಲ್ಲೇ ಇರೋ ತುಮಕೂರು ಜಿಲ್ಲೆಯ ಹಳ್ಳಿಯೊಂದರಲ್ಲಿ. ಹಳ್ಳಿಗರು ಏನ್ ಹೇಳ್ತಾರೆ ಅಂದ್ರೆ ಊರೊಳಗಿನ ಕಲ್ಲು ಬಾವಿ ತುಂಬಬೇಕು. ಊರ ಬಾಗಿಲಲ್ಲಿ ಇರೋ ಕಲ್ಲು ಕೋಳಿ ಕೂಗಬೇಕು. ಮರಳುಬಸವಣ್ಣ ಎದ್ದು ನಿಂತು ಗುಟರು ಹಾಕಬೇಕು. ಆಗ ಕಲಿಯುಗ ಅಂತ್ಯವಾಗತ್ತೆ. ಪ್ರಳಯ ಆಗೇ ಆಗತ್ತೆ… ಇದನ್ನವರು ಗೋಡೆ ಮೇಲೆ ಬರೆದಿದ್ದಾರೆ. ಇದು ಎಂಥವರಲ್ಲೂ ಗಾಬರಿ ತಳಮಳ ಹುಟ್ಟಿಸುವಂಥಾದ್ದು.
ಇದೆಲ್ಲಾ ಬರೆದಿರೋದು ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಹೆಬ್ಬಾಗಿಲಿನಲ್ಲಿ. ಈ ರೀತಿ ಬರೆದು ಕೆಲದಿನಗಳಷ್ಟೇ ಆಗಿವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮಕರ ಸಂಕ್ರಾಂತಿ ಮರುದಿನ ಸೂರ್ಯಗ್ರಹಣ ಇತ್ತು. ಆ ದಿನ ಈ ಊರಿನ ಬೆಲ್ಲದಚ್ಚಿನ ಆಕಾರದ ಕಲ್ಲು ಬಾವಿಯ ನೀರಿನ ಮಟ್ಟ ಕೊಂಚ ಏರಿತ್ತಂತೆ. ಗಿಡಗಂಟಿಗಳು ತುಂಬಿಕೊಂಡಿದ್ದ ಈ ಬಾವಿಯಲ್ಲಿ ನೀರು ಕಂಡ ವಿಚಾರ ಗ್ರಾಮದ ತುಂಬಾ ಸುದ್ದಿಯಾಯ್ತು. ಬಾವಿ ಸುತ್ತಲಿನ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಸಿದ್ರು. ಕೂಡಲೇ ಪುರಾಣ ಕತೆಗೆ ಲಿಂಕ್ ಕೂಡಾ ಪಡಕೊಂಡಿತ್ತು. ಇದು ಪ್ರಳಯದ ಮುನ್ಸೂಚನೆ ಅಥವಾ ಯಾವುದೋ ವಿಪತ್ತಿನ ಸೂಚನೆಯೇ ಸರಿ ಎಂದು ಜನಜನಿತವಾಯ್ತು.
ಕಲ್ಲು ಬಾವಿ ನೀರಿನ ಮಟ್ಟ ಏರಿದ್ದೇನೋ ಅಚ್ಚರಿಗೆ ಕಾರಣವಾಯ್ತು. ಕೂಡಲೇ ಜನ ಊರ ಹೆಬ್ಬಾಗಿಲ ಕಡೆಗೆ ಹೋದ್ರಂತೆ. ಹೆಬ್ಬಾಗಿಲ ಕಟ್ಟಡದ ದ್ವಾರದ ಕಲ್ಲು ಚೌಕಟ್ಟಿನ ಮೇಲೆ ಇರೋ ಕೋಳಿ ಚಿತ್ರ ಕೊಂಚ ವಾಲಿದೆ. ಕಾಲು ಹಿಂದಕ್ಕೆ ಹೋಗಿದೆ. ಕತ್ತು ಮುಂದಕ್ಕೆ ವಾಲಿದೆ… ಹೀಗೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ಕೊಡಲಾರಂಭಿಸಿದ್ರಂತೆ. ಇದು ನಿಜವಾಗ್ಲೂ ಆಪತ್ತಿನ ಮುನ್ಸೂಚನೆ ಅನ್ನೋದು ಈ ಹೆಬ್ಬಾಗಿಲ ಸುತ್ತಮುತ್ತ ಇರೋವರ ವಾದ. ಇದು ಸುದ್ದಿಯಾಗುತ್ತಿದ್ದಂತೆ ಜನ ತಂಡೋಪತಂಡವಾಗಿ ಇಲ್ಲಿ ಆಗಮಿಸ್ತಿದ್ದಾರಂತೆ. ಹೀಗಾಗಿ ಈ ಹೆಬ್ಬಾಗಿಲ ಸುತ್ತಮುತ್ತ ಇರೋ ವ್ಯಾಪಾರಿಗಳು ಇದಕ್ಕೆ ಸುಣ್ಣ ಬಣ್ಣ ಬಳಿಸೋ ಕೆಲಸ ಮಾಡಿದ್ದಾರೆ. ಜೊತೆಗೆ ಪ್ರಳಯದ ಮುನ್ಸೂಚನೆ ಕುರಿತ ಅಂಶಗಳನ್ನು ಇಲ್ಲಿ ಬರೆಸಿದ್ದಾರೆ. ಪಕ್ಕದಲ್ಲೇ ಶ್ರೀಕೃಷ್ಣ ಫೋಟೋ… ಜೊತೆಗೊಂದು ಕಾಣಿಕೆ ಡಬ್ಬಾ !
ಇಷ್ಟೇನಾ ಅಂದ್ಕೋಬೇಡಿ. ಪ್ರಳಯದ ಮುನ್ಸೂಚನೆ ಪ್ರಕಾರ ಮರಳುಬಸವಣ್ಣ ಎದ್ದು ನಿಂತು ಗುಟರು ಹಾಕಬೇಕು. ಮರಳು ಬಸವಣ್ಣನ ಗುಡಿ ಬಳಿ ಹೋದ್ರೆ ಅಲ್ಲಿ ಕೊಂಚ ಜನಜಂಗುಳಿ.. ಬಸವಣ್ಣನ ಆರಾಧನೆ ಮಾಡ್ತಾ ಇದ್ದ ಜನ. ಈ ಬಸವಣ್ಣನ ಗಾತ್ರ ತುಂಬ ಸಣ್ಣದಿತ್ತಂತೆ. ಈಗ ಈ ಮಟ್ಟಕ್ಕೆ ಬೆಳೆದಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ ಬಸವಣ್ಣ ಎದ್ದು ನಿಂತು ಗುಟರು ಹಾಕೇ ಹಾಕ್ತಾನೆ. ಯಾಕೆಂದ್ರೆ ಈಗಾಗ್ಲೇ ಬಸವಣ್ಣ ಕಣ್ ಬಿಟ್ಟಿದ್ದಾನೆ. ಲಿಂಗಾಕಾರವಾಗಿದ್ದ ಬಸವಣ್ಣ ಇಂದು ಈ ಹಂತಕ್ಕೆ ಬೆಳೆದ ಅಂದ್ರೆ ಇದು ಪ್ರಳಯದ ಮುನ್ಸೂಚನೆ ಅಲ್ವೇ ..?
ಚೇಳೂರು ಇತಿಹಾಸ
ಹೀಗೆ ಚೇಳೂರಿನ ಜನರಿಗೆ ಪ್ರಳಯದ ಮುನ್ಸೂಚನೆ ಸ್ಪಷ್ಟವಾಗಿದೆಯಂತೆ. ಐತಿಹಾಸಿಕವಾಗಿ ತನ್ನದೇ ಅಸ್ತಿತ್ವ ಹೊಂದಿರುವ ಚೇಳೂರು ಗ್ರಾಮ ಇದೀಗ ಪ್ರಳಯದ ಮುನ್ಸೂಚನೆ ಸಿಕ್ಕಿದ್ದಕ್ಕಾಗಿ ಸುದ್ದಿಯಲ್ಲಿದೆ. ಚೇಳೂರಲ್ಲಿ ಕಂಡಿದ್ದು ನಿಜಕ್ಕೂ ವಿಪತ್ತಿನ ಸೂಚನೇನಾ ? ಹೀಗೊಂದು ಪ್ರಶ್ನೆ ಮೂಡಿದಾಗ ಅಲ್ಲಿನ ಇತಿಹಾಸದ ಬಗ್ಗೆ ಗಮನಹರಿಸ್‌ಬೇಕು ಅಂತ ಅನಿಸ್ತು. ಹಾಗೆ ಇತಿಹಾಸದ ಪುಟ ತಿರುಗಿಸುವ ಪ್ರಯತ್ನ ಮಾಡಿದಾಗ ಅಲ್ಲಿ ಬಹಿರಂಗಗೊಂಡ ವಿಚಾರಗಳಿವು…
ಈ ಗ್ರಾಮ ಚೋಳರ ಆಳ್ವಿಕೆಗೆ ಒಳಪಟ್ಟಿಂತ್ತಂತೆ. ಹೀಗಾಗಿ ಇದು ಚೋಳರ ಊರು ಎಂದು ಖ್ಯಾತಿ ಪಡೆದಿತ್ತು. ಚೋಳೂರು ಅನ್ನೋ ಹೆಸರು ಚಾಲ್ತಿಯಲಿದ್ರೂ ಬರ್‍ತಾ ಬರ್‍ತಾ ಇದು ಚೇಳೂರು ಆಗಿದೆ ಅಂತಾರೆ ಇಲ್ಲಿನ ಜನ. ಇಲ್ಲಿ ಕೋಟೆ ಕೂಡಾ ಇತ್ತಂತೆ. ಈಗ ಉಳಿದಿರೋದು ಕೋಟೆ ಬಾಗಿಲು ಅರ್ಥಾತ್ ಊರ ಹೆಬ್ಬಾಗಿಲು. ಇದಲ್ದೇ ೧೦೧ ಶಿವಾಲಯಗಳು ಕೂಡಾ ಇದ್ವಂತೆ. ಈಗ ಬೆರಳೆಣಿಕೆ ದೇವಸ್ಥಾನಗಳಷ್ಟೇ ಉಳಿದುಕೊಂಡಿದೆ. ಈಗ ಎಲ್ಲರ ಗಮನ ಸೆಳೆದಿರೋ ಕಲ್ಲುಬಾವಿ ಸಮೀಪವೇ ಕಾಲಭೈರವೇಶ್ವರನ ದೇವಸ್ಥಾನ ಇದೆ. ಸ್ವಲ್ಪ ದೂರದಲ್ಲಿ ಮರಳುಬಸವೇಶ್ವರನ ದೇವಸ್ಥಾನ ಇದೆ. ಈ ದೇವಸ್ಥಾನದ ಇತಿಹಾಸದ ಪುಟ ತಿರುಗಿಸಿದ್ರೆ ಅಲ್ಲೂ ಪ್ರಳಯದ ಮುನ್ಸೂಚನೆಯ ವಿಚಾರ ಪ್ರಸ್ತಾಪವಾಗಿದೆ ಅಂತಾರೆ ಜನ.
ಅಂದಾಜು ೫ ಸಾವಿರ ಜನಸಂಖ್ಯೆ ಹೊಂದಿರೋ ಈ ಗ್ರಾಮ ಹೋಬಳಿ ಕೇಂದ್ರ. ಈ ಊರಿನಲ್ಲಿ ಲಿಂಗಾಯಿತರದ್ದೇ ಪ್ರಾಬಲ್ಯ. ಉಳಿದ ಸಮಾಜದವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ರಸ್ತೆ ಸೌಕರ್ಯ, ಕುಡಿವ ನೀರು ಮತ್ತು ಇತರೆ ಮೂಲ ಸೌಕರ್ಯದಿಂದ ಗ್ರಾಮ ವಂಚಿತವಾಗಿದೆ. ಇದಲ್ದೇ ಈ ಗ್ರಾಮದ ಪಕ್ಕದಲ್ಲೇ ಹೇಮಾವತಿ ನಾಲೆ ಕೂಡಾ ಇದ್ದು, ಇದನ್ನು ಚೇಳೂರು ಕೆರೆಗೆ ಬಿಟ್ಟಿಲ್ಲ ಅನ್ನೋ ಅಸಮಾಧಾನ ಕೂಡಾ ಗ್ರಾಮಸ್ಥರಿಗಿದೆ. ಇದೆಲ್ಲದರ ಹೊರತಾಗಿ ಮೊನ್ನೆ ಜನವರಿ ೧೫ರಂದು ಕಲ್ಲುಬಾವಿಯಲ್ಲಿ ನೀರುಕಾಣಿಸಿಕೊಂಡಿದ್ದು ಅನೇಕ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಊರೊಳಗಿನ ಕಲ್ಲುಬಾವಿಯಲ್ಲಿ ಗಂಗೋದ್ಭವ ಆಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದಲ್ದೇ ಬಾವಿಯ ಸ್ವಚ್ಚತೆ ಕೂಡಾ ಆಗಿದ್ದು, ನೀರನ್ನು ಇನ್ನೂ ಸ್ವಚ್ಚಗೊಳಿಸಿಲ್ಲ. ಇಷ್ಟೆಲ್ಲಾ ಆದ್ರೂ ಈ ಗ್ರಾಮಕ್ಕಿರುವ ಐತಿಹಾಸಿಕ ಮಹತ್ವವನ್ನು ಹೆಮ್ಮೆಯಿಂದ ಹೇಳಿಕೊಳ್ತಾರೆ.
ಇನ್ನು ಒಂದಷ್ಟು ಕೆದಕಿದ್ರೆ, ಚೇಳೂರು ಮತ್ತು ಚುಂಚನಗಿರಿ ಮಠದ ನಡುವಿನ ಸಂಬಂಧ ಬಹಿರಂಗಗೊಳ್ಳತ್ತೆ. ಚುಂಚನಗಿರಿ ಜಾತ್ರೆಯ ಮೊದಲ ಪೂಜೆ ಮತ್ತು ಒಡಲು ತುಂಬವ ಸಾಮಗ್ರಿ ಇದೇ ಚೇಳೂರು ಗ್ರಾಮದಿಂದ್ಲೇ ಹೋಗಬೇಕು. ಚೇಳೂರಿನಲ್ಲೂ ಒಂದು ಭೈರವೇಶ್ವರ ದೇವಸ್ಥಾನ ಇತ್ತಂತೆ. ಅದಕ್ಕೂ ಚುಂಚನಗಿರಿ ದೇವಸ್ಥಾನಕ್ಕೂ ಸಂಬಂಧ ಇತ್ತಂತೆ. ಆದ್ರೆ ಈಗ ಚೇಳೂರಿನಲ್ಲಿ ಭೈರವೇಶ್ವರ ದೇವಸ್ಥಾನ ಇಲ್ಲ. ಚುಂಚನಗಿರಿ ದೇವಸ್ಥಾನದ ಜಾತ್ರೆಗೆ ಮೊದಲ ಪೂಜಾ ಸಾಮಗ್ರಿಗಳು ಈಗ ಇಲ್ಲಿಂದ ಹೋಗ್ತಾ ಇಲ್ವಂತೆ. ಎಲ್ಲವೂ ನಾಶವಾಗ್ತಾ ಇದೆ ಅನ್ನೋ ಭಾವನೆ ಇಲ್ಲಿ ಬೇರೂರಿದೆ. ಹೀಗೆ ಇತಿಹಾಸದ ಪುಟ ತಿರುವಲು ಪ್ರಯತ್ನಿಸಿದ್ರೆ, ಒಬ್ಬೊಬ್ಬರು ಒಂದೊಂದು ಐತಿಹ್ಯ ಬಿಚ್ಚಿಡ್ತಾರೆ.
ಇದು ನಿಜಾನಾ !
ಚೇಳೂರು ಗ್ರಾಮದ ಬಗ್ಗೆ ಗ್ರಾಮಸ್ಥರು ಹೇಳುವ ಐತಿಹ್ಯಗಳು ಅನೇಕ. ಇವುಗಳಲ್ಲಿ ಪ್ರಳಯದ ಮುನ್ಸೂಚನೆ ನೀಡಿದ ಸ್ಥಳಗಳತ್ತ ನೋಡಿದ್ರೆ ಮೊದಲು ಗಮನ ಸೆಳೆಯೋದು ಕಲ್ಲು ಬಾವಿ ಮತ್ತು ಕಲ್ಲು ಕೋಳಿ. ಇವುಗಳ ಇತಿಹಾಸ ಏನು ? ಗ್ರಾಮಸ್ಥರು ಏನ್ ಹೇಳ್ತಾರೆ ನೋಡಿ…
ಬೆಲ್ಲದಚ್ಚಿನ ಆಕಾರದಲ್ಲಿರೋ ಈ ಬಾವಿ ಚೇಳೂರು ಬಾವಿ ಎಂದೇ ಪ್ರಸಿದ್ಧ. ೫೦ ಅಡಿ ಅಗಲ, ೫೦ ಅಡಿ ಉದ್ದ ಮತ್ತು ೫೦ ಅಡಿ ಆಳ ಇರೋ ಈ ಬಾವಿಯಲ್ಲೇ ಗ್ರಾಮಸ್ಥರಿಗೆ ಮೊದಲು ಪ್ರಳಯದ ಸೂಚನೆ ಸಿಕ್ಕಿದ್ದಂತೆ. ಹೀಗಾಗಿ ಇದು ಇಂದು ಜನಾಕರ್ಷಣೆಯ ಕೇಂದ್ರ. ಇದರ ಇತಿಹಾಸ ಕೆದಕಿದ್ರೆ ಅನಾವರಣಗೊಳೋ ವಿಚಾರಗಳಿವು. ಈ ಬಾವಿಗೆ ಬೆಲ್ಲದಚ್ಚಿನ ಬಾವಿ, ಸೂಳೆ ಬಾವಿ ಅನ್ನೋ ಹೆಸರು ಕೂಡಾ ಇದೆ. ಕ್ರಿ.ಶ.೮೬೮ರಲ್ಲಿ ಬಿಜ್ಜಳ ಮಹಾದೇವಿ ಈ ಕಲ್ಲು ಬಾವಿ ನಿರ್ಮಿಸಿದಳು ಎಂದು ಇತಿಹಾಸ ಹೇಳತ್ತೆ. ಚೇಳೂರಿನಲ್ಲಿ ೧೦೧ ದೇವಸ್ಥಾನಗಳನ್ನು ನಿರ್ಮಿಸಿದ ವೇಳೆ, ಈ ಬಾವಿಯನ್ನೂ ನಿರ್ಮಿಸಲಾಯ್ತಂತೆ. ಮಹಾಶಿವ ಭಕ್ತೆಯಾಗಿದ್ದ ಬಿಜ್ಜಳ ಮಹಾದೇವಿ ಊರಿನ ಮಹಾರಾಣಿ ಆಗಿದ್ರೂ, ಸೂಳೆ ಎಂದೇ ಜನ ಪರಿಗಣಿಸಿದ್ರು. ಹೀಗಾಗಿ ಬಾವಿಗೂ ಸೂಳೆ ಬಾವಿ ಅಂತಿದ್ರು ಅನ್ನೋದು ಐತಿಹ್ಯ. ಈ ಬಾವಿಯ ಪಕ್ಕದಲ್ಲೇ ಕೆಳಕ್ಕೆ ಇಳಿಯೋದಕ್ಕೆ ಪ್ರತ್ಯೇಕ ದ್ವಾರ ಮತ್ತು ಮೆಟ್ಟಿಲುಗಳಿವೆ. ನವರಂಗ ಚಾವಣಿ ಹೊಂದಿರೋ ಈ ದ್ವಾರದ ಏಳನೇ ಮೆಟ್ಟಿಲು ನುಣುಪಾಗಿದೆ. ಇಲ್ಲಿ ಕಾಲಭೈರವೇಶ್ವರ ಸ್ವಾಮಿಯ ಸರ್ಪ ಮಲಗಿರುತ್ತಿತ್ತು ಅನ್ನೋ ಪ್ರತೀತಿ ಕೂಡಾ ಇದೆ.
ಈ ದ್ವಾರದ ಮೂಲಕವೇ ಜನ ಕೆಳಕ್ಕಿಳಿದು ಗಂಗಾ ಪೂಜೆ ಕೂಡಾ ಮಾಡ್ತಿದ್ರಂತೆ. ಇನ್ನೊಂದು ಐತಿಹ್ಯದ ಪ್ರಕಾರ, ಆದಿಚುಂಚನಗಿರಿ ಬೆಟ್ಟದ ಮೇಲೆ ಚೇಳೂರು ಕಂಬ ಇದೆಯಂತೆ. ಅದರ ಮೇಲೆ ದೀಪ ಹಚ್ಚಿಟ್ರೆ ಅದರ ಬಿಂಬ ಈ ಬಾವಿಯಲ್ಲಿ ಪ್ರತಿಬಿಂಬವಾಗಿ ಬೆಳಗ್ತಾ ಇತ್ತಂತೆ. ಇದನ್ನು ನೋಡಿದ ಬಳಿಕವೇ ಊರಲ್ಲಿ ಊಟ ಮಾಡ್ತಿದ್ರಂತೆ. ಈ ಬಾವಿಯ ಮತ್ತೊಂದು ವಿಶೇಷತೆ ಎಂದ್ರೆ ಮಳೆ ಬಂದ್ರೆ ತುಂಬೋಲ್ಲ ಬರಗಾಲದಲ್ಲೂ ಬತ್ತೋಲ್ಲವಂತೆ. ಅಕಸ್ಮಾತ್ ಈ ಬಾವಿ ತುಂಬಿ ಹರಿದ್ರೆ ಪ್ರಳಯ ಗ್ಯಾರೆಂಟಿ ಅನ್ನೋ ಮಾತು ಇಲ್ಲಿ ಪ್ರಚಲಿತವಿದೆ. ಮೊನ್ನೆ ಗಂಗೋದ್ಭವದ ಬಳಿಕ ಇದಕ್ಕೆ ಇನ್ನುಷ್ಟು ಮಹತ್ವ ಬಂದಿದೆ.
ಕಲ್ಲುಬಾವಿ ಇತಿಹಾಸ ಇಷ್ಟಾದ್ರೆ ಇನ್ನು ಕಲ್ಲುಕೋಳಿ ಇತಿಹಾಸ ಇನ್ನಷ್ಟು ಕುತೂಹಲಕಾರಿ. ಕ್ರಿ.ಶ. ೮೬೮ರಲ್ಲಿ ಬಿಜ್ಜಳ ಮಹಾದೇವಿ ಆಡಳಿತದಲ್ಲಿದ್ದ ಈ ಗ್ರಾಮದ ಹೆಬ್ಬಾಗಿಲಿಗೆ ಕಲ್ಲಿನ ಕೋಳಿ ಚಿತ್ರ ಅಳವಡಿಸಲಾಗಿತ್ತು. ಪ್ರತೀತಿಯೊಂದರ ಪ್ರಕಾರ ಈ ಕಲ್ಲುಕೋಳಿ ಕೂಗಿದ್ರೆ ಕಲಿಯುಗ ಅಂತ್ಯ ಅನ್ನೋ ಮಾತು ಚಾಲ್ತಿಯಲ್ಲಿದೆ. ಇದಕ್ಕೆ ತಕ್ಕಂತೆ, ಬಾವಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಈ ಕಲ್ಲುಕೋಳಿ ಕಡೆಗೆ ನೋಡಿದ ಜನ ಇದನ್ನೂ ಪ್ರಳಯದ ಮುನ್ಸೂಚನೆಗೆ ತಳಕು ಹಾಕಿದ್ರು. ಒಟ್ಟಿನಲ್ಲಿ ಪ್ರಳಯದ ಮುನ್ಸೂಚನೆ ಕುರಿತ ಈ ಕತೆಗಳಿಗೆ ಬುನಾದಿ ಒದಿಗಸೋಕೆ ಜನ ಪ್ರಯತ್ನಿಸ್ತಿದ್ದಾರೆ. ಇದಕ್ಕೆ ತಕ್ಕಂತೆ ಪ್ರಳಯದ ಮುನ್ಸೂಚನೆ ಕೊಡೋ ಸ್ಥಳಗಳು ಸುಣ್ಣ ಬಣ್ಣ ಕಾಣ್ತಿದ್ದಾವೆ.
ಚೇಳೂರು ಗ್ರಾಮದಲ್ಲಿ ಪ್ರಳಯದ ಮುನ್ಸೂಚನೆಯೇ ಸಿಕ್ಕಿರೋದು. ಹೊರಗಿನವರು ಏನೇ ಹೇಳಿದ್ರೂ ಅದರಲ್ಲಿ ಹುರುಳಿಲ್ಲ. ನಾವು ಕಂಡಿರೋದು ಸುಳ್ಳಲ್ಲ. ಎಂದೂ ಎಂಟು ಅಡಿ ನೀರು ಕಂಡೇ ಇರದ ಬಾವಿಯಲ್ಲಿ ಅಷ್ಟು ನೀರು ಕಂಡಿದೆ ಅಂದ್ರೆ ಅದು ಸುಳ್ಳೇ ? ಇದಷ್ಟೇ ಪ್ರಳಯದ ಮುನ್ಸೂಚನೆಪರವಾಗಿ ವಾದ ಮಾಡೋರ ಸಮರ್ಥನೆ
ಈ ಕಲ್ಲು ಬಾವಿ ನೋಡಿ ಸರ್, ಇದ್ರಲ್ಲಿ ಇಷ್ಟು ನೀರು ಕಾಣ್ತಿರೋದು ಇದೇ ಮೊದ್ಲು. ಇನ್ನು ಮರಳು ಬಸವಣ್ಣ ಸಣ್ಣದಾಗಿ ಲಿಂಗಾಕಾರದಲ್ಲಿದ್ದ. ಈಗ ಬಸವಣ್ಣನ ಮುಖ ಸ್ಪಷ್ಟವಾಗಿದೆ. ಕಣ್ಣು ಬಿಟ್ಟಿದ್ದಾನೆ ಬೇರೆ… ಇದೆಲ್ಲಾ ಪ್ರಳಯದ ಮುನ್ಸೂಚನೆ ಅಲ್ದೇ ಮತ್ತೇನು ? ಇಲ್ಲಿನ ಸ್ಥಳ ಪುರಾಣ ತೆಗೆದು ನೋಡಿದ್ರೆ ಅಲ್ಲಿ ಇದನ್ನು ಸ್ಪಷ್ಟವಾಗಿ ಬರೆಯಲಾಗಿದೆ. ಅದನ್ನೇ ಇದೀಗ ಊರ ಹೆಬ್ಬಾಗಿಲ ಗೋಡೆ ಮೇಲೂ ಬರೆಸಿದ್ದೇವೆ. ಇದನ್ನು ಸತ್ಯ ಅಂತ ಪರಿಗಣಿಸದೇ ಹೋದ್ರೆ ಹೇಗೆ ? ಅಂತ ಪ್ರಶ್ನಿಸುತ್ತಲೇ ಶ್ರೀ ಸಂಗಮೇಶ್ವರ ಅನ್ನೋ ಶರಣರ ಇತಿಹಾಸವನ್ನೂ ಇದಕ್ಕೆ ತಳಕು ಹಾಕ್ತಾರೆ.
ಬರೋಬ್ಬರಿ ಸಾವಿರ ವರ್ಷಗಳ ಹಿಂದೆ ಅಂದ್ರೆ ಕ್ರಿ.ಶ.೧೦೦೮ರಲ್ಲಿ ಇದು ದೊಡ್ಡ ನಗರವಾಗಿತ್ತು. ಚೋಳರ ಅಧೀನದಲ್ಲಿತ್ತು ಈ ಪ್ರದೇಶ. ಬಳಿಕ ಹೊಯ್ಸಳ ರಾಜನ ಆಳ್ವಿಕೆಗೆ ಒಳಪಟ್ಟಿತ್ತು. ಅದಾದ ಮೇಲೆ ಸಂಗಮ ವಂಶದ ಆಳ್ವಿಕೆ. ಶಿವಪ್ಪನಾಯಕ ಎಂಬ ಪಾಳೇಗಾರ ಇಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ಮಾಳವರು ವ್ಯಾಪಾರಕ್ಕಾಗಿ ಬಂದಿದ್ರು. ಇಲ್ಲಿ ಸೊಬಗು ನೋಡಿ ಬೆರಗಾದವರು, ಸಂಚು ರೂಪಿಸಿ ರಾಜನನ್ನು ಕೊಲ್ತಾರೆ. ರಾಜನ ಮಡದಿ ಗೌರಮ್ಮ ಆಂಧ್ರದ ನೊಳಂಬ ಪಲ್ಲವರ ರಾಜಧಾನಿ ಸೇರ್‍ತಾಳೆ. ಅಲ್ಲಿಂದ ಈಗಿನ ಹೇಮಾವತಿಗೆ ಬಂದು ಕುಲಗುರು ಸಂಗಮೇಶ್ವರರನ್ನು ಭೇಟಿ ಮಾಡಿ ಕಷ್ಟದಿಂದ ಪಾರುಮಾಡುವಂತೆ ಕೋರುತ್ತಾಳೆ. ಆಗ ಸಂಗಮೇಶ್ವರರು ತಮ್ಮ ದಿವ್ಯದೃಷ್ಟಿಯಿಂದ ಇಲ್ಲಿಗೆ ಆಗಮಿಸಿ ಮೂರು ಹಿಡಿ ಮರಳು ಹಾಕಿ ನೂರಾ ಒಂದು ಕೊಡ ನೀರು ಅದಕ್ಕೆ ಸುರಿದು ಈ ಬಸವಣ್ಣನನ್ನು ಸ್ಥಾಪಿಸಿದ್ರು. ಆಗ ಪ್ರಳಯದ ಮುನ್ಸೂಚನೆ ಕೂಡಾ ಕೊಟ್ರು. ಬಳಿಕ ಸಮೀಪದಲ್ಲೇ ಇರೋ ಹೊಲದಲ್ಲಿ ಹೋಗಿ ಮೂರು ಕಲ್ಲುಗಳ ನಡುವೆ ಐಕ್ಯರಾದ್ರು ಅಂತಾರೆ ಜನ.
ಹೊಲದ ನಡುವೆ ಇರೋ ಈ ಮೂರು ಕಲ್ಲುಗಳು ದೂರ ದೂರ ಇದ್ವಂತೆ. ಈಗ ಇದು ಹತ್ತಿರಕ್ಕೆ ಬರತ್ತಾ ಇದೆ ಇದರ ಹಿಂದೆ ಕೂಡಾ ಎರಡು ಭಿನ್ನ ಕತೆಗಳಿವೆ. ಇದು ಸಂಗಮೇಶ್ವರರ ಐಕ್ಯ ಸ್ಥಳ. ಈಗಾಗ್ಲೇ ಎರಡು ಕಲ್ಲು ಹತ್ತಿರ ಬಂದಿವೆ. ಇನ್ನೊಂದು ಕಲ್ಲು ಕೂಡಾ ಹತ್ತಿರ ಬಂದ್ರೆ ಪ್ರಳಯ ಗ್ಯಾರೆಂಟಿ ಅಂತಾರೆ ಸ್ಥಳೀಯರು. ಈ ಕಲ್ಲುಗಳು ಸಂಗಮೇಶ್ವರರ ಶಾಪಕ್ಕೆ ತುತ್ತಾದ ಮೂವರು ರೈತರಂತೆ. ಇವರಿಗೆ ಶಾಪ ವಿಮೋಚನೆ ಆಗಬೇಕಾದ್ರೆ, ಕಲಿಯುಗ ಅಂತ್ಯವಾಗಬೇಕಂತೆ. ಪ್ರಳಯ ಸಂದರ್ಭದಲ್ಲಿ ಇವರಿಗೂ ಮೋಕ್ಷ. ಆಗ ಈ ಕಲ್ಲುಗಳು ಹತ್ತಿರ ಬರ್‍ತವೆ ಅನ್ನೋ ವಾದ ಕೂಡಾ ಇದೆ.
ಒಟ್ಟಿನಲ್ಲಿ ಪ್ರಳಯದ ಮುನ್ಸೂಚನೆ ಇದು ಅಂತ ನೀವು ನಂಬಲೇ ಬೇಕು. ಇದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಸ್ಥಳೀಯರು ಅನೇಕರು ಮಾಡ್ತಾ ಇದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಗ್ರಾಮದ ಬಗ್ಗೆ ಒಂದಿಷ್ಟು ಪ್ರಚಾರ ಸಿಕ್ಕಿದ್ರೆ, ಪ್ರವಾಸಿಗರು ಬಂದು ಹೋದ್ರೆ ವ್ಯಾಪಾರ ಮತ್ತು ಗ್ರಾಮದ ಅಭಿವೃದ್ಧಿ ಸಾಧ್ಯವೇ ಅನ್ನೋ ಆಸೆ ಇವರದು ಅಂದ್ರೆ ತಪ್ಪಲ್ಲ.
ಚೇಳೂರು ಗ್ರಾಮಸ್ಥರು ಏನೇ ಹೇಳಿದ್ರೂ ಅವ್ರಲ್ಲೇ ಎರಡು ಅಭಿಪ್ರಾಯ ಇದೆ. ಒಂದು ಈ ಘಟನೆ ಮೂಢನಂಬಿಕೆ ಅನ್ನೋ ಮಾತಾದ್ರೆ, ಇನ್ನೊಂದು ಪವಾಡ ಅನ್ನೋ ಮಾತು. ಇದನ್ನು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸ್ತಾರೆ ಕೂಡಾ. ವಿರೋಧ ಅಭಿಪ್ರಾಯ ಹೊಂದಿ ಇದು ಮೂಢ ನಂಬಿಕೆ ಅನ್ನೋರು ಏನಂತಾರೆ ಗೊತ್ತೆ?
ಸರ್ ನೀವು ಏನೇ ಹೇಳಿ… ಇದೆಲ್ಲಾ ಮೂಢನಂಬಿಕೆ. ಚೇಳೂರು ಕಲ್ಲುಬಾವಿಯಲ್ಲಿ ನೀರೇನೋ ಬಂದಿದೆ. ಇದು ಸತ್ಯ. ಇದಕ್ಕೆ ಬೇರೆ ಕಾರಣ ಇರಬಹುದು. ಪಕ್ಕದಲ್ಲೆ ಒಂದು ಕಿ.ಮೀ. ದೂರದಲ್ಲಿ ಹೇಮಾವತಿ ನಾಲೆ ಇದೆ. ಈ ವರ್ಷ ಅತಿ ಹೆಚ್ಚು ಸಮಯ ಈ ನಾಲೆಯಲ್ಲಿ ನೀರು ಹರಿದಿದೆ. ಇದರಿಂದ ಈ ಬಾವಿಯಲ್ಲಿ ನೀರು ಮೇಲಕ್ಕೆ ಏರಿರಬಹುದು. ಆದ್ರೆ, ಬಸವಣ್ಣನ ಗಾತ್ರ ದೊಡ್ಡದಾಗ್ತಾ ಇದೆ. ಇದಕ್ಕೂ ವೈಜ್ಞಾನಿಕ ಕಾರಣ ಇರಬಹುದು. ಅದನ್ನು ಹುಡುಕೋದು ಬಿಟ್ಟು ಈ ರೀತಿ ಮೂಢನಂಬಿಕೆ ಅನುಸರಿಸಿದ್ರೆ ಹೇಗೆ ಅನ್ನೋ ಪ್ರಶ್ನೆ ಮುಂದಿಡ್ತಾರೆ
ಇದು ಮೂಢನಂಬಿಕೆ ಅಲ್ದೇ ಮತ್ತಿನ್ನೇನು ? ಪಕ್ಕದಲ್ಲೇ ಒಂದು ಬಡಾವಣೆ ಇದೆ. ಅಲ್ಲಿರೋ ಮನೆಗಳ ಸೀವೇಜ್ ನೀರು ಇಂಗಿ ಈ ಬಾವಿ ಸೇರಿರುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳನ್ನು ಪರಿಗಣಿಸದೇ ಕೇವಲ ಪುರಾಣ ಕತೆಗಳ ಜಾಡು ಹಿಡಿದು ಪವಾಡ ಅಂತ ಹೇಗೆ ಸಾಧಿಸ್ತಾರೆ ? ಕಲ್ಲುಕೋಳಿ ಕೂಗತ್ತಾ ? ಎಲ್ಲಾದ್ರೂ ಕೇಳಿದ್ದೀರಾ ? ತಪ್ಪಲ್ವಾ ಇದು ಅನ್ನೋ ವಾದ ಕೂಡಾ ಇದೆ.
ಒಟ್ಟಿನಲ್ಲಿ ಕಲ್ಲುಬಾವಿ ನೀರು ಉಕ್ಕಿ ಹರಿದಿಲ್ಲ. ನೀರಿನ ಪ್ರಮಾಣ ಎಂಟು ಅಡಿಯಷ್ಟೇ ಇದೆ. ಆದ್ರೂ ಇದನ್ನು ಪ್ರಳಯದ ಮುನ್ಸೂಚನೆ ಅನ್ನೋದು ಯಾಕೆ ? ಕೋಳಿ ಕೂಡಾ ಇದ್ದಂಗೆ ಇದೆ. ಆದ್ರೂ ಈ ರೀತಿ ಗಾಸಿಪ್ ಹಬ್ಬಿಸೋದಕ್ಕೆ ಏನನ್ನೋಣ…?
—-






ಬೆಳಗ್ಗೆ ಕಚೇರಿಗೆ ಆಗಮಿಸುವ ಧಾವಂತ. ಸುಂಕದಕಟ್ಟೆಯಿಂದ ನಮ್ಮ ಆಫೀಸ್‌ಗೆ ಕೇವಲ ೧೨ ಕಿ.ಮೀ. ಆದರೂ ಬೆಂಗಳೂರಿನ ಟ್ರಾಫಿಕ್ ನಡುವೆ ಅದು ದೂರವೇ ! ನಂಗೋ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಂಡು ಹೋಗೋ ಹುಚ್ಚು. ಮೈಸೂರು ರೋಡ್ ಮೂಲಕವೇ ಹೋಗಬೇಕು ಅಂತಿದ್ದೋನು ನಾನು. ಹೀಗೆ ಸುತ್ತಾಡಿಕೊಂಡು ಹೋಗೋದಾದ್ರೆ ಬರೋಬ್ಬರಿ ೧೭ ಕಿ.ಮೀ. ಆಗತ್ತೆ. ಆದರೂ ಟೈಮ್ ಸೇವ್ ಆಗತ್ತೆ ಅಂತಿದ್ದೆ ಯಾರೇ ಕೇಳಿದ್ರು.


ಐದು ಐದೂವರೆ ಅಡಿ ಉದ್ದದ ಶರೀರ. ಟೂತ್ ಬ್ರಷ್ ಮಾದರಿಯ ಮೀಸೆ. ದೊಗಲೆ ಕೋಟು, ಪ್ಯಾಂಟ್, ತಲೆಗೊಂದು ಟೋಪಿ, ಕೈಲೊಂದು ಕೋಲು. ಈ ರೀತಿ ಶರೀರ ಪ್ರಕೃತಿಯನ್ನು ವರ್ಣಿಸಿದರೆ ಸಾಕಲ್ವೇ ? ವ್ಯಕ್ತಿ ಯಾರು ಅಂತ ಹೇಳೋಕೆ ? ಯಸ್.. ಈ ವ್ಯಕ್ತಿ ಚಾಪ್ಲಿನ್ ಎಂದೇ ಖ್ಯಾತ.
ಸ್ಟಾರ್ ಕ್ಯಾಂಪೇನರ್ ಅಂದ ಕೂಡಲೇ ಜನಸಾಮಾನ್ಯರ ಮನಸ್ಸಿನಲ್ಲಿ ಸಿನಿಮಾ ತಾರೆಯರೇ ರಾರಾಜಿಸುತ್ತಾರೆ. ರಾಜಕೀಯ ಪಕ್ಷಗಳೂ ಹಾಗೆಯೇ
ಬಿಂಬಿಸುತ್ತಾ ಬಂದಿವೆ. ಯಾವುದೇ ಚುನಾವಣೆ ಇರಲಿ ಸಿನಿಮಾ ತಾರೆಯರು ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ನಡೆಸುವುದು ಸಾಮಾನ್ಯ. ಬಿಜೆಪಿ ಪರವಾಗಿ ಹೇಮಮಾಲಿನಿ, ಶತ್ರುಘ್ನ ಸಿನ್ಹಾ, ಕಾಂಗ್ರೆಸ್ ಪರವಾಗಿ ಗೋವಿಂದಾ, ನಗ್ಮಾ ಮತ್ತಿತರರು ಗುರುತಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕರ್ನಾಟಕದತ್ತ ಕಣ್ಣು ಹಾಯಿಸಿದರೆ ಜಗ್ಗೇಶ್, ಸಾಯಿಕುಮಾರ್, ಶ್ರುತಿ ಬಿಜೆಪಿ ಪರವಾಗಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ. ನಿಜವಾಗಿಯೂ ಸ್ಟಾರ್ ಕ್ಯಾಂಪೇನರ್ ಅಂದರೆ ಕೇವಲ ಸಿನಿಮಾ ತಾರೆಯರು ಮಾತ್ರ ಅಂದ್‌ಕೊಂಡ್ರೆ ತಪ್ಪಾಗುತ್ತದೆ. 

ಅರೆ ಇದು ನಾನು ಅಂದು ಕಂಡ ಚಿತ್ರದುರ್ಗನಾ..!
ಲೋಕಸಭೆ ಚುನಾವಣೆ ಘೋಷಣೆ ಆಗಿದೆ. ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಯುಗಾದಿ ಹಬ್ಬ ಆದರೂ ಚುನಾವಣೆ ಕಾವು ಏರುತ್ತಿರುವುದಿರಂದ ರಜೆಯ ಕನಸು ಕಾಣುವಂತಿಲ್ಲ. ಯಾಕೆಂದರೆ ಪತ್ರಕರ್ತರ ಹಣೆಬರಹವೇ ಅಷ್ಟು.. ಮನೆ ಮಂದಿ ಜೊತೆ ಹರಟಲು ಸಮಯ ಸಿಗಲ್ಲ ಅನ್ನೋದು ಬಿಟ್ಟರೆ.. ಕೆಲಸದಲ್ಲಿ ಸಿಗೋ ಖುಷಿ … ರಸ ನಿಮಿಷಗಳು ಬೇರೆಲ್ಲಿ ಕಾಣಲು ಸಾಧ್ಯ ! ಅದಕ್ಕೆ ಅನ್ನೋದು ಎಲ್ಲದಕ್ಕೂ ಅದೃಷ್ಟ ಇರಬೇಕು ಎಂದು..